Wednesday, September 30, 2009

ರಾಗಿಂಗ್ ಅಲ್ಲ, ಸ್ವಾಗತ



ಹೊಸ ಕಾಲೇಜು, ಹೊಸ ವಾತಾವರಣ ಎಂದಾಗ ಅಲ್ಲಿಗೆ ಹೋಗುವುದೇ ಒಂಥರಾ ಬೇಜಾರು. ರಾಗಿಂಗ್ ಎಂಬ ಪೆಡಂಭೂತದ ಕೆಂಗಣ್ಣಿಗೆ ಗುರಿಯಾಗಿ ಹಿರಿಯ ವಿದ್ಯಾರ್ಥಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕೋ ಎಂಬ ಭಯ. ಈ ಸಹಜ ಅಳುಕಿನಿಂದಲೇ ನಾನು ಕಾಲೇಜು ಪ್ರವೇಶಿಸಿದ್ದೆ. ಆದರೆ ಹಿರಿಯ ವಿದ್ಯಾರ್ಥಿಗಳು ಸ್ವಾಗತಿಸಿದ ರೀತಿ ನೋಡಿ ಅಚ್ಚರಿಪಟ್ಟೆ.
ಅದೊಂದು ಸಣ್ಣ ಕಾರ್ಯಕ್ರಮ. ಪದವಿಯ ಪ್ರಥಮ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದ ನಮ್ಮನ್ನು ಸ್ವಾಗತಿಸಲು ಅಲ್ಲಿ ದ್ವಿತೀಯ, ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ದಂಡು ನೆರೆದಿತ್ತು. ಕಾರ್ಯಕ್ರಮ ನಿಗದಿಯಾಗಿದ್ದ ಕೊಠಡಿಯಲ್ಲಿ ನಮಗಿಂತ ಮೊದಲೇ ಒಳ ಪ್ರವೇಶಿಸಿದ ಹಿರಿಯ ವಿದ್ಯಾರ್ಥಿಗಳು ನಮ್ಮನೊಂದೆರಡು ನಿಮಿಷ ಹೊರಗೆ ಕಾಯಿಸಿದರು. ಎರಡ್ಮೂರು ನಿಮಿಷಗಳ ಬಳಿಕ ನಮ್ಮನ್ನು ಒಳಗೆ ಕರೆದಾಗ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಖುಷಿ ಪಟ್ಟಿದ್ದೆ.
ಪಾನಕ ಮತ್ತು ಬೆಲ್ಲದ ಜೊತೆಗೆ ಶುಭಾಷಯ ಪತ್ರವೊಂದನ್ನು ಕೈಗಿತ್ತು ನಮಗಾಗಿ ಕಾದಿರಿಸಿದ್ದ ಆಸನದಲ್ಲಿ ಕುಳ್ಳಿರಿಸಿದರು. ಆಗ ಶುರು ನಮ್ಮ ಅಗ್ನಿ ಪರೀಕ್ಷೆ. ನಮ್ಮನ್ನು ನಾವು ಪರಿಚಯಿಸಿಕೊಳ್ಳುವ ಸಮಯ ಬಂತು. ಮೊದಲು ಎಷ್ಟೇ ತಯಾರಿ ಮಾಡಿಕೊಂಡು ಬಂದಿದ್ದರೂ ಅಷ್ಟು ಜನರೆದುರಲ್ಲಿ ಮಾತನಾಡುವಾಗ ನಾಲಗೆ ತಡವರಿಸಿತು. ನನ್ನ ಹವ್ಯಾಸ ಹಾಡುವುದು ಎಂದಾಗ ಮರುತ್ತರವಾಗಿ ' one song please... ' ಎಂದು ಬಂದಾಗ ನಗಬೇಕೇ? ಅಳಬೇಕೇ? ಎಂದು ಗೊತ್ತಾಗಲಿಲ್ಲ. ನಾನಂತೂ ಬಚಾವಾದೆ. ನನ್ನ ಕೆಲ ಸ್ನೇಹಿತೆಯರಿಗಂತೂ ಹಾಡಲೇಬೇಕಾಯಿತು. ಅಷ್ಟೇ ಅಲ್ಲ ' once more...' ಎದುರಿಸಬೇಕಾಯಿತು. ಕೆಲವರಂತೂ ತಮ್ಮನ್ನು ತಾವು ಪರಿಚಯಿಸಿಕೊಂಡ ಬಗೆ ವಿಶೇಷವಾಗಿತ್ತು.
ನಿಮ್ಮ ಜೊತೆ ನಾವಿದ್ದೇವೆ ಎಂಬಂತೆ ಹಿರಿಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ನಮಗೆ 'ಸಾಥ್' ನೀಡಿದರು. ಸುಮಾರು ಒಂದೂವರೆ ಘಂಟೆಗಳ ಕಾಲ ನಡೆದ ಆ ಕಾರ್ಯಕ್ರಮ ಕೇವಲ ಒಂದು ನಿಮಿಷದಂತೆ ಕಳೆದುಹೋಗಿತ್ತು. ನಮ್ಮಲ್ಲಿದ್ದ ಸುಪ್ತ ಪ್ರತಿಭೆಯೊಂದು ಅಲ್ಲಿ ಹೊರಬಂದಿತ್ತು. ನಮ್ಮ ಜೀವನದ ಅಮೂಲ್ಯ ಕ್ಷಣವೆಂಬಂತೆ ನಡೆದ ಆ ಕ್ಷಣಗಳು ಮನಸ್ಸಿನ ಪುಟದಲ್ಲಿ ಅಚ್ಚಳಿಯದೇ ಉಳಿದಿದೆ.

1 comment:

Dileep Hegde said...

ಓ... ಹೀಗೂ ಇರ್ತಾರಾ ಕಾಲೇಜ್ ಹುಡುಗರು..??
ನಿಜಕ್ಕೂ ಎಲ್ಲ ಕಾಲೇಜ್ ವಿಧ್ಯಾರ್ಥಿಗಳೂ ರೂಡಿಸಿಕೊಳ್ಳುವಂತ ಆದರ್ಶ ಇದು...
ಸುಮ್ಮನೇ ಹೊಸ ವಿಧ್ಯಾರ್ಥಿಗಳಿಗೆ rag ಮಾಡಿ ಗೋಳು ಹುಯ್ಕೊಳೊ ಬದಲು ಹೀಗೆ ಅಚ್ಚುಕಟ್ಟಾದ ಕಾರ್ಯಕ್ರಮ ಮಾಡಿದ್ರೆ ಎಷ್ಟು ಚೆನ್ನಾಗಿರತ್ತೆ ಅಲ್ವಾ...?
ತುಂಬಾ ಚೆನ್ನಾಗಿ ಬರೆದಿದ್ದೀರಾ... Keep it up.. :)

Dileep Hegde
http://www.hanihani.co.cc