
ಭಾನುವಾರ ಬೆಳಿಗ್ಗೆ ಆದ್ರೆ ಸಾಕು, ನಿದ್ದೆಯಿಂದ ಕಣ್ಣು ಬಿಡಲು ಮನಸ್ಸೇ ಬರುವುದಿಲ್ಲ. ಇಂದಾದರೂ ಸ್ವಲ್ಪ ಆರಾಮವಾಗಿ ನಿದ್ದೆ ಮಾಡುವ ಎಂದು ಒಳ ಮನಸ್ಸು ಹೇಳುತ್ತಿರುತ್ತದೆ. ಆದ್ರೂ ಸೂರ್ಯನ ಬೆಳಕು ಬಿದ್ದಾಗ ನಿದ್ದೆ ಎಲ್ಲ ಹೊರಟು ಹೋಗಿರುತ್ತದೆ. ಎದ್ದು ಮೊಬೈಲ್ ನೋಡಿದ್ರೆ Have a happy weekend ಎಸ್ಎಂಎಸ್ ಗಳಿಂದತುಂಬಿರುತ್ತದೆ.
ಪ್ರತಿ ದಿನ ಶಾಲೆಗೆ ಹೋಗುವ ಪುಟ್ಟ ಮಗುವೂ ಕೂಡ ತನ್ನ ವೀಕೆಂಡ್ ಯಾವಾಗ ಬರುತ್ತೆ ಎಂದು ವಾರದ ಪ್ರಾರಂಭ ದಿನದಲ್ಲಿಯೇ ಲೆಕ್ಕ ಹಾಕುವುದನ್ನು ಕಂಡರೆ ವೀಕೆಂಡ್ ನ ಪ್ರಸಿದ್ದಿ ಎಷ್ಟಿದೆಯೆಂದು ತಿಳಿಯಬಹುದು. ವೀಕೆಂಡ್ ಅರ್ಥಾತ್ ವಾರದ ಕೊನೆಯ ದಿನ ಬಂದರೆ ಸಾಕು ಅದೊಂದು ರೀತಿ ವಿಶಿಷ್ಟ ದಿನ. ಆ ದಿನ ಮನಸ್ಸು ದೇಹ ಎಲ್ಲಕ್ಕೂ ಒಂದು ರೀತಿಯ ರಿಲೀಫ್ ಅನುಭವ. ವಾರವಿಡೀ ಬ್ಯೂಸಿಯಾಗಿ ದಣಿದಿದ್ದ ದೇಹಗಳು ಅಂದು ಹೆಚ್ಚಾಗಿ ಮನಸ್ಸನ್ನು ದಣಿದ ದೇಹವನ್ನು ಹದಗೊಳಿಸಿ ಹೊಸ ಚೈತನ್ಯ ತುಂಬುವ ಕೆಲಸ ಮಾಡುತ್ತವೆ.
ಇಂದಿನ ಬ್ಯೂಸಿ ಲೈಫ್ ನಲ್ಲಿ ಮನೆ ಮಂದಿ ದಿನಂಪ್ರತೀ ಒಟ್ಟಿಗಿರುವ ಅವಕಾಶಗಳು ತುಂಬಾ ಕಡಿಮೆ. ಶಿಫ್ಟ್ ಡ್ಯೂಟಿ ಬಂದ ನಂತರವಂತೂ ಅದು ಕನಸಿನ ಮಾತಾಗಿದೆ. ನಗರ ಪ್ರದೇಶಗಳ ಹಲವು ದಂಪತಿಗಳು ಒಟ್ಟಿಗೆ ಸೇರುವುದು ತಿಂಗಳಿಗೊಮ್ಮೆಯಂತೆ! ಹಾಗಾಗಿ ವೀಕೆಂಡ್ ದಿನ ಮನೆ ಮಂದಿಯ ಜತೆ ಸಮಯ ಕಳೆಯುವವರೇ ಹೆಚ್ಚು. ಗ್ರಾಮಿಣ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಾಣಸಿಗದು. ನಗರ ಪ್ರದೇಶಗಳಲ್ಲಿ ವೀಕೆಂಡ್ ಎಂದರೆ ಅದೊಂದು ರೀತಿಯ ಹಬ್ಬದ ದಿನದಂತೆ.
ಗಂಡ ಹೆಂಡತಿ ಇಬ್ಬರ ಸಂಸಾರ ಮಾತ್ರ ಆಗಿದ್ದರೆ ಪ್ರತೀ ದಿನ ಹೆಂಡತಿ ಅಡುಗೆ ಮಾಡಿ ಬಡಿಸುತ್ತಿದ್ದರೆ ಅಂದು ಆಕೆಗೆ ರೆಸ್ಟ್! ಗಂಡನ ಪಾಕ ಪ್ರವೀಣತೆ ಪರೀಕ್ಷಿಸುವ ಅವಕಾಶವೂ ಆಕೆಗೆ ಸಿಗುತ್ತದೆ. ಇನ್ನೂ ಒಂದೇ ರೂಮ್ ಗಳಲ್ಲಿರುವ ಬ್ಯಾಚುಲರ್ ಗಳು ಅಂದು ತಮ್ಮ ಬಟ್ಟೆ ಒಗೆದು ಒಣಗಿಸುವ ಕೆಲಸಗಳನ್ನು ಮುಗಿಸಿ ಸಂಜೆಯಾಗುವ ಹೊತ್ತಿಗೆ ಸ್ನೇಹಿತರೆಲ್ಲಾ ಕೂಡಿಕೊಂಡು ಎಲ್ಲಿಗಾದರೂ ಹೋಗುವ ಪ್ಲಾನ್ ಮಾಡುತ್ತಾರೆ. ಕಾಲೇಜು ಹುಡುಗಿಯರಿಗೆ ಅಂದು ತಮ್ಮ 'ಲುಕ್' ಮೈಂಟೇನ್ ಮಾಡುವ ಕೆಲಸ. ಇನ್ನು ಹಾಸ್ಟೇಲ್ ನಲ್ಲಿರುವ ವಿದ್ಯಾರ್ಥಿಗಳು ಔಟಿಂಗ್ ಎಲ್ಲಾ ಮುಗಿಸಿಕೊಂಡು ಬಂದು ಅಸೈನ್ಮೆಂಟ್ ಬಾಕಿಯಿದ್ದರೆ ಅದನ್ನು ಪೂರ್ಣಗೊಳಿಸುವ, ಪಾಠವನ್ನು ಮನನ ಮಾಡುವ ಕೆಲಸದಲ್ಲಿ ತೊಡಗುತ್ತಾರೆ.
ಮನೆಯಲ್ಲಿ ಹೆಚ್ಚು ಜನರಿರುವ ಅಮ್ಮಂದಿರಿಗೆ ಅಂದು ಹೆಚ್ಚು ಕೆಲಸ. ಕೆಲವೊಮ್ಮ ಮನೆ ಇಡೀ ಕ್ಲೀನ್ ಮಾಡುವ ಕೆಲಸವೂ ಅಂದೇ ನಡೆದಿರುತ್ತದೆ. ಇನ್ನು ಯುವ ಜೋಡಿಗಳಿಗೆ ಅಂದು ಸಂಜೆ ತಮ್ಮವರ ಜೊತೆ ಶಾಪಿಂಗ್ ಹೋಗುವ ಹುಮ್ಮಸ್ಸು. ಹೆಚ್ಚಾಗಿ ಮಾಲ್ ಗಳೆಲ್ಲಾ ಇದೇ ದಿನ ತುಂಬಿ ತುಳುಕುತ್ತಿರುತ್ತದೆ. ಇನ್ನು ಟಾರ್ಗೆಟ್ ಕ್ರಾಸ್ ಮಾಡಿದವಾಱೀಗೇ ಆಫೀಸ್ ಬಾಸ್ ಗಳಿಂದ ಪಾರ್ಟೀ ಸಿಗುವುದೂ ಇದೇ ದಿನ. ಎಲ್ಲಾ ಮುಗಿಸಿ ಸ್ನೇಹಿತರೊಂದಿಗೆ ವೀಕೆಂಡ್ ಷೋಗೆ ಹೋಗುವುದೂ ಇದೇ ದಿನ. ವೀಕೆಂಡ್ ಎಂದರೆ ಅದು ಕೇವಲ ಭಾನುವಾರವೇ ಆಗಿರಬೇಕಾಗಿಲ್ಲ. ಹೆಚ್ಚಾಗಿ ಇತ್ತೀಚಿನ ದಿನಗಳಲ್ಲಿ ವೀಕೆಂಡ್ ರಜೆ ಎಂದರೆ ಬೇಕಾದ ದಿನಗಳಲ್ಲಿ ತೆಗೆದುಕೊಳ್ಳುವ ಅವಕಾಶವೂ ಇದೆ. ಮಾಧ್ಯಮ ಕೇತ್ರದಲ್ಲಿ ಇದು ಹೆಚ್ಚು. ಕೆಲವರಿಗೆ ಸೋಮವಾರ ವಾರದ ವೀಕೆಂಡ್ ಆದರೆ ಇನ್ನು ಕೆಲವರಿಗೆ ಅದರ ಮರುದಿನ. ಹೀಗೆ ಪಟ್ಟಿ ಸಾಗುತ್ತದೆ.
ವೀಕೆಂಡ್ ಬಂದಾಗ, ಮನಸ್ಸಿಗೆ ಅದು ಖುಷಿ ಕೊಡುವುದು ನಿಜ. ವೀಕೆಂಡ್ ಮುಗಿದಾಗ ಒಂಥರಾ ಬೇಸರವಾಗುವುದು ನಿಜ. ಮುಂದೆ ವೀಕೆಂಡ್ ಗೆ ಎಷ್ಷು ದಿನ ಇದೆ ಎಂದು ಕಳ್ಳ ಮನಸ್ಸು ಅಲ್ಲೇ ಲೆಕ್ಕ ಹಾಕುವುದೂ ಇದೆ ಅಲ್ವಾ? Any way have a happy weekend....
