
ಪ್ರತಿಯೊಬ್ಬನೂ ತನ್ನ ಬದುಕಿನಲ್ಲಿ ಬಾಲ್ಯವೆಂಬ ಚಂದ್ರಬಿಂಬವನ್ನು ಕಂಡಾಗ ಮುಗುಳ್ನಗುತ್ತಾನೆ. ಆ ದಿನಗಳೇ ಹಾಗೆ. ಸ್ವಚ್ಛಂದ ಪರಿಸರದಲ್ಲಿ ರೆಕ್ಕೆ ಬಿಚ್ಚಿ ಸಂತಸದ ಹಕ್ಕಿಯಾಗಿ ಸುತ್ತಿದ ದಿನಗಳವು. ಆ ದಿನಗಳು ಒಂದೊಂದು ಕಾದಂಬರಿಯಾಗುವಷ್ಟು ಸ್ವಾರಸ್ಯಕರವಾಗಿರುತ್ತವೆ. ಕೆಲವರ ಬಾಲ್ಯ ವಾತ್ಸಲ್ಯದ ತೊಟ್ಟಿಲಾದರೆ, ಇನ್ನು ಕೆಲವರದು ಅನಾಥ ಪ್ರಜ್ಞೆಯನ್ನು ಆವರಿಸಿರುವಂತಹದ್ದು.
ವ್ಯಕ್ತಿಯೊಬ್ಬ ಇಂದು ಏನೇ ಆಗಿದ್ದರೂ ಕಳೆದು ಹೋದ ಬಾಲ್ಯದ ದಿನಗಳನ್ನು ದ್ವೇಷಿಸಲಾರ. ಆತನನ್ನು ಜೀವನದ ಉತ್ತುಂಗ ಶಿಖರಕ್ಕೆ ಕೊಂಡೊಯ್ದದ್ದು ಬಾಲ್ಯದಲ್ಲಿ ನಡೆದ ಘಟನೆಗಳು ಕಲಿಸಿಕೊಟ್ಟ ಪಾಠವಾಗಿರಲೂ ಬಹುದು. ಭಾರತದ ಮಾಜೀ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಅವರು ಬಾಲ್ಯದಲ್ಲಿ ರಾಮೇಶ್ವರದ ಬೀದಿಗಳಲ್ಲಿ ದಿನಪತ್ರಿಕೆ ಮಾರುತ್ತಿದ್ದಾಗ ಹಾರುತ್ತಿದ್ದ ವಿಮಾನಗಳನ್ನು ಕಂಡು, ತಾನೂ ಪೈಲೆಟ್ ಆಗಬೇಕು ಎಂದು ಕನಸು ಕಂಡಿದ್ದರಂತೆ. ಆ ಒಂದು ಪ್ರೇರಣೆಯೇ ಮುಂದೆ ಅವರನ್ನು ಆ ಮಟ್ಟಕ್ಕೇರಿಸಿತು.
ಬಾಲ್ಯದಲ್ಲಿ ಹೆತ್ತವರಿಂದ ಸಿಗುವ ಮಮತೆ ಅಪಾರ. ಆ ಸಮಯದಲ್ಲಿ ಏನೇ ಕಿತಾಪತಿಗಳು ಮಾಡಿದ್ದರೂ ಅದು ಆಟಕ್ಕುಂಟು ಲಕ್ಕಕ್ಕಿಲ್ಲ ಎಂಬಂತವುಗಳು. ಬಾಲ್ಯದಲ್ಲಿ ತೆಗೆಸಿದ ಹಾಲುಗಲ್ಲದ ಫೋಟೋಗಳು, ಅಂಬೆಗಾಲಿಡುತ್ತಾ ಹಲ್ಲಿಲ್ಲದೆ ನಗೆ ಬೀರಿದ ದಿನಗಳು, ತೊದಲು ಮಾತಾಡುತ್ತಿದ್ದುದು, ಚಂದಮಾಮನನ್ನು ಚೆಂಡೆಂದು ತಿಳಿದು ಅಮ್ಮನೊಂದಿಗೆ ತಂದುಕೊಡುವಂತೆ ಹೇಳಿ ಅಳುತ್ತಿದ್ದ ದಿನಗಳನ್ನು ಯೋಚಿಸಿದರೆ ಮುಖದಲ್ಲೊಮ್ಮೆ ಮಂದಹಾಸ ಮೂಡುತ್ತದೆ.
'ಮೂರರಲ್ಲಿ ಕಲಿತದ್ದು ನೂರರವರೆಗೆ...' ಎಂಬ ಗಾದೆ ಮಾತಿನಂತೆ ಎಳೆತನದ ಕಲಿಕೆ ಚಿರವಾಗುತ್ತದೆ. ಮನೆಯೇ ಮೊದಲ ಪಾಠಶಾಲೆಯಾಗಿ, ತಾಯಿಯೇ ಮೊದಲ ಗುರುವಾಗುತ್ತಾಳೆ. ಶಾಲೆಯ ಕಡೆಗೆ ಪುಟ್ಟ-ಪುಟ್ಟ ಹೆಜ್ಜೆ ಹಾಕುತ್ತಿದ್ದ ದಿನಗಳನ್ನು ನೆನೆದರೆ ಏನೋ ಒಂಥರಾ ಖುಷಿಯಾಗುತ್ತದೆ. ಅಂದಿನ ತುಂಟಾಟಗಳನ್ನು ನೆನೆದರೆ ನಗೆ ಉಕ್ಕುತ್ತದೆ. ನಮಗರಿವಿಲ್ಲದಂತೆ ಕಣ್ಣೀರು ಹರಿಯುತ್ತದೆ. ಧರ್ಮ-ಜಾತಿ, ಶ್ರೀಮಂತ-ಬಡವ, ಮೇಳು-ಕೀಳು, ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲದೇ ಮುಗ್ಧ ಮನಸ್ಸಿನಿಂದ ಎಲ್ಲರೊಂದಿಗೂ ಬೆರೆಯುತ್ತಿದ್ದುದು, ಬೆತ್ತದ ರುಚಿ ತೋರಿಸುತ್ತಿದ್ದ ಪಿ.ಟಿ. ಸರ್, ಕನ್ನಡ ಅಧ್ಯಾಪಕರಿಗೆ ಹೆದರಿ ಪದ್ಯಗಳನ್ನು ಕಂಠಪಾಠ ಮಾಡುತ್ತಿದ್ದು, ಅಪ್ಪ ಹೊಡೆದಾಗ ಬುದ್ದಿವಾದ ಹೇಳುವ ಅಮ್ಮ ಹೀಗೆ ಸಾವಿಲ್ಲದ ನೆನಪುಗಳು ಕಣ್ಣೆದುರಿಗೆ ಬರುತ್ತದೆ. ಆ ಶಾಲಾ ದಿನಗಳ ಗೆಳೆಯರು ಎಲ್ಲಾದರೂ ಕಾಣಸಿಕ್ಕಾಗ 'ಚಡ್ಡಿ ದೋಸ್ತು' ಎಂದು ಪರಿಚಯಿಸುವಾಗ ಸಿಗುವ ಮಜಾವೇ ಬೇರೆ.
'ಸವಿಸವಿನೆನಪು ಸಾವಿರ ನೆನಪು' ಎಂಬ 'ಮೈ ಆಟೋಗ್ರಾಫ್' ಚಿತ್ರದ ಗೀತೆಯಂತೆ ಸವಿನೆನಪುಗಳೇ ತುಂಬಿರುವ ಬಾಲ್ಯ ಮತ್ತೆಂದೂ ಮರಳಿ ಬಾರದು. ಆದರೆ ಆ ನೆನಪುಗಳು ಎಂದಿಗೂ ನಮ್ಮಿಂದ ಮರೆಯಾಗದು.

