
ಪ್ರೀತಿಯ ಬಾಪೂಜಿ,
ಹೇಗಿದ್ದೀರಾ? ನೀವಂತೂ ಸ್ವರ್ಗದಲ್ಲಿ ಆರಾಮವಾಗಿದ್ದೀರಾ ಅಂತ ನಂಗೊತ್ತು. ಯಾಕಂದ್ರೆ ಈ ದೇಶ ಮತ್ತು ಅದರ ಜನತೆಯನ್ನು ಬ್ರಿಟೀಷರ ನರಕ ಯಾತನೆಯಿಂದ ಮುಕ್ತಿಗೊಳಿಸಿದ ನಿಮಗೆ ಸ್ವರ್ಗ ಪ್ರಾಪ್ತವಾಗದಿರುವುದಲ್ಲವೇ? ಬಾಪೂ ನೀವೇನೋ ನಮಗೆ ಒಳ್ಳೆಯದನ್ನೇ ಮಾಡಿ, ಒಳ್ಳೆಯತನವನ್ನೇ ಕಲಿಸಿ ಹೋದ್ರಿ... ಆದರೆ ಇಂದು ನಿಮ್ಮ ಈ ಮಕ್ಕಳು ಏನಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿದೆಯಾ? ಅದನ್ನು ತಿಳಿಸುವ ಉದ್ದೇಶದಿಂದ ಓರ್ವ ಗೆಳತಿಯಾಗಿ ಈ ಪತ್ರ ಬರೆಯುತ್ತಿದ್ದೇನೆ. ಏಕವಚನ ಪ್ರಯೋಗಿಸುವುದಕ್ಕಾಗಿ ಕ್ಷಮೆಯಿರಲಿ.
ಬಾಪೂ, ನೀ ಅದೆಷ್ಟೋ ಕಷ್ಟಪಟ್ಟು ಹೋರಾಡಿ, ನಮಗಾಗಿ ಬ್ರಿಟೀಷರಿಂದ ಸ್ವಾತಂತ್ರ್ಯ ಕೊಡಿಸಿದೆ. ಆದರೆ ಇಂದು ನಿನ್ನ ಮಕ್ಕಳಿಗೆ ಪ್ರತಿ ದಿನ ಬಿಡು, ಕಡೇ ಪಕ್ಷ ಸ್ವಾತಂತ್ರ್ಯ ಪಡೆದ ದಿನದಂದಾದರೂ ನಿನ್ನ ಶ್ರಮ, ಹೋರಾಟ ನೆನಪಿಸಿಕೊಳ್ಳುವ ವ್ಯವಧಾನ ಇಲ್ಲ. ಆ ದಿನ ರಜೆಯ ದಿನವೆಂದು ಸಂತೋಷ ಪಡುವ ಅದೆಷ್ಟೋ ಜನ ನಮ್ಮಲ್ಲಿದ್ದಾರೆ. ಬಾಪೂ ನೀನೆಂದೂ ಅಧಿಕಾರಕ್ಕಾಗಿ ಹಂಬಲಿಸಿಲ್ಲ. ಸ್ವಾತಂತ್ರ್ಯ ನಂತರ ಎಲ್ಲರೂ ಆಧಿಕಾರ ಬಯಸಿದರೆ ನೀನು ಮಾತ್ರ ಯಾವ ಅಧಿಕಾರ ಬಯಸದೇ ನಿನ್ನಲ್ಲಿದ್ದ ನಿಸ್ವಾರ್ಥ ಮನಸ್ಸನ್ನು ಎಲ್ಲರಿಗೂ ಪರಿಚಯಿಸಿದೆ. ಇಂದು ನಿನಗೆ ಏನಾಗುತ್ತಿದೆ ಗೊತ್ತಾ? ಇಂದು ಜನ ಅಧಿಕಾರಕ್ಕಾಗಿ ಏನು ಬೇಕಾದರು ಮಾಡೋ ಮಟ್ಟಕ್ಕೆ ಬಂದಿದ್ದಾರೆ. ಇಲ್ಲಿ ದಿನ ಬೆಳಗಾದರೆ ಆ ಪಕ್ಷ-ಈ ಪಕ್ಷದ ಮಧ್ಯೆ ಕಚ್ಚಾಟ, ಪಕ್ಷಾಂತರ ಅನ್ನೋ ವಿಷಯ ಮಾದ್ಯಮಗಳಲ್ಲಿ ರಾರಾಜಿಸುತ್ತಿದೆ. ಅಧಿಕಾರಿಗಳ ಭ್ರಷ್ಟಾಚಾರ ನಾವು ನಮ್ಮ ಆಡಳಿತ ವ್ಯವಸ್ಥೆಯನ್ನು ವಿರೋಧಿಸುವಂತೆ ಮಾಡಿದೆ. ಇಂದು ಅಧಿಕಾರಿಗಳ ಮತ್ತು ರಾಜಕಾರಣಿಗಳ ಮಿತಿ ಮೀರಿದ ಆಸ್ತಿ ಸಂಪಾದನೆ ತಡೆಗಟ್ಟಲು 'ಲೋಕಾಯುಕ್ತ' ಎಂಬ ಅಧಿಕಾರಿಯನ್ನು ನೇಮಿಸಲಾಗಿದೆ.
ಗ್ರಾಮಾಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾದಂತೆ ನೀ ತಾನೆ ಹೇಳಿದ್ದು. ಆದ್ರೆ ಬಾಪೂ ಇಂದು ನಮ್ಮ ದೇಶದ ಅದೆಷ್ಟೋ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಿಂದೆ ಅವಿದ್ಯಾವಂತ ನಿರುದ್ಯೋಗಿಗಳು ಅಂತ ಇದ್ರಲ್ಲ, ಆದ್ರೆ ಇಂದು ವಿದ್ಯಾಂವಂತರು ಉದ್ಯೋಗ ದೊರೆಯದೇ ಸರ್ಕಾರ ವಿರೋಧಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಬಾಪು ಹಿಂದೆ 'ಉಳುವವನೇ ಹೊಲದೊಡೆಯ' ಅಂತ ಇತ್ತಲ್ವಾ? ಆದರೆ ಇಂದು ನಮಗೆ ಉಳಿಯೋಕೆ ಭೂಮಿಯಿಲ್ಲದ ಪರಿಸ್ಥಿತಿ ಎದುರಾಗಿದೆ. ಇದ್ದ ಭೂಮಿಯ ಬೆಲೆ ನಮಗೆಟುಕದಷ್ಟು ಮೇಲೇರಿದೆ. ಇಂದು ಕಾಡು, ಪ್ರಾಣಿ-ಪಕ್ಷಿ, ನೀರು ಶುದ್ದ ಗಾಳಿ ಅಳಿವಿನಂಚಿನಲ್ಲಿದೆ. ಕಾಡಿನ ಜಾಗದಲ್ಲಿ ದೊಡ್ಡ-ದೊಡ್ಡ ಕಾರ್ಕಾನೆ, ಮನೆಗಳು ತಲೆ ಎತ್ತಿವೆ. ಮಾನವನ ಈ ಕೃತ್ಯದಿಂದ ಬೇಸತ್ತ ಪ್ರಕೃತಿ ಸುನಾಮಿ, ಬಿರುಗಾಳಿ, ಪ್ರವಾಹ ಮತ್ತು ಬರಗಾಲದಂತಹ ಭಯಾನಕ ತಿರುಗೇಟು ನೀಡಿದೆ. ಆದರೂ ಇನ್ನೂ ಮಾನವ ಎಚ್ಚೆತ್ತುಕೊಳ್ಳಿಲ್ಲ. ಅವನ ಕೃತ್ಯ ಈಗಲೂ ಮುಂದುವರೆಯುತ್ತಿದೆ.
ಬಾಪೂ, ನೀನೇನೋ ಅಹಿಂಸಾ ತತ್ವ ಪ್ರತಿಪಾದಿಸಿದೆ. ಆದರೆ ಇಂದು ಎಲ್ಲಿ ನೋಡಿದರೂ ಕೊಲೆ, ಸುಲಿಗೆ, ಮೋಸ-ವಂಚನೆ, ಹಿಂಸೆ, ಕೋಮುಗಲಭೆ, ಅನ್ಯಾಯ-ಅತ್ಯಾಚಾರ ಕಾಣುತ್ತಿದೆ. ಹಿಂದೆ ನಮ್ಮ ದೇಶ ವಿದೇಶಿಯರ ಆಕ್ರಮಣಕ್ಕೆ ಬಲಿಯಾಗುತ್ತಿತ್ತು. ಆದರೆ ಇಂದು ಭಯೋತ್ಪಾದಕರ ದಾಳಿಗೆ ನಿರಂತರವಾಗಿ ತುತ್ತಾಗುತ್ತಿದೆ. ಹೊರಗಿನ ಭಯೋತ್ಪಾದಕರಿಗೆ ನಮ್ಮ ಧನದಾಹಿ ಭೃಷ್ಟ ಅಧಿಕಾರಿಗಳು ನೆರವು ನೀಡುತ್ತಿರುವುದು ನಮಗೆ ಬೇಸರ ತಂದಿದೆ. ಇವರನ್ನು ನಮ್ಮ ವ್ಯವಸ್ಥೆಯೊಳಗಿನ ಭಯೋತ್ಪಾದಕರು ಎಂದರೆ ತಪ್ಪಾಗಲಾರದು.
ಬಾಪೂ... ನಮ್ಮಲ್ಲಿ ಹುಟ್ಟಿ, ನಮ್ಮ ಅನ್ನ ತಿಂದುಂಡು ನಮಗೇ ಎರಡು ಬಗೆಯೋ ಇವರನ್ನು ತಡೆಯೋದು ಹೇಗೆ? ಅಡಿಪಾಯವೇ ಸರಿಯಿಲ್ಲದಿದ್ದರೆ ಮುಂದೆ ನಮ್ಮ ದೇಶದ ಸ್ಥಿತಿಯೇನು?
ಇನ್ನು ನೀ ಹೇಳಿದ್ದೆ. 'ಒಬ್ಬಳು ಹೆಂಗಸು 12 ಗಂಟೆ ರಾತ್ರಿಯಲ್ಲಿ ಯಾವಾಗ ಒಬ್ಬಳೇ ರಸ್ತೆಯಲ್ಲಿ ಸಂಚರಿಸುತ್ತಾಳೊ ಅಂದು ದೇಶದ ಸ್ವಾತಂತ್ರ್ಯ ಪರಿಪೂರ್ಣವಾಗುವುದು ಎಂದು. ಆದ್ರೆ ಇಂದು ಮಹಿಳೆ ಮಧ್ಯಾಹ್ನ 12 ಗಂqಎಯ್ ಹೊತ್ತಲ್ಲೂ ನಿರ್ಭೀತಳಾಗಿ ಸಂಚರಿಸಲಾಗುತ್ತಿಲ್ಲ. ಸಿನಿಮಾ, ಮಾಧ್ಯಮಗಳಲ್ಲಂತೂ ಹೆಣ್ಣನ್ನು ಮಾರಾಟದ ಸರಕನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಬಾಪೂ ನೀನು ವಿದೇಶದಲ್ಲಿ ಕಲಿತು ಇಲ್ಲಿ ಬಂದು ಉಡುಗೆ ತೊಡುಗೆ, ಗುಣ ನಡತೆಯಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದೆ. ಆದರೆ ಇಂದಿನ ಜನ ತಮ್ಮ ಸಂಸ್ಕೃತಿಯನ್ನು ತೊರೆದು, ಪಾಶ್ಚಾತ್ಯ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.
ಬಾಪೂ... ನನ್ನ ಈ ಪತ್ರ ಓದಿ ನಿನಗೆ ನಮ್ಮ ದೇಶದ ಜನರ ಬಗ್ಗೆ ಬೇಜಾರಾಗುತ್ತಿರಬಹುದು. ಆದರೆ ನಿನಗೆ ಬೇಜಾರು ಮಾಡುವ ಉದ್ದೇಶ ನನಗಿಲ್ಲ. ಇಂದು ಜನ ಅಂದು ನೀವು ಮಾಡಿದ ಬಲಿದಾನ, ಪಟ್ಟ ಶ್ರಮ, ಹೋರಾಟ ಮರೆತು, ಯಾವತ್ತೂ ಸರಿಪಡಿಸಲಾಗದ ತಪ್ಪನ್ನು ಮಾಡ ಹೊರಟಿದ್ದಾರೆ. ಇಂದು ಜನ ಇನ್ನೊಂದು ಗಾಂಧಿಯ ನಿರೀಕ್ಷೆಯಲ್ಲಿದ್ದಾರೆಯೇ ಹೊರತು, ತಾವು ಒಳ್ಳೆಯವರಾಗಿ ಸಮಾಜಕ್ಕೆ ಒಳಿತನ್ನು ಮಾಡುವ ಗುಂಗಿನಲ್ಲಿಲ್ಲ. ನಿಮ್ಮ ಕನಸಿನ ನಾಡು ಇಂದು ಅಶಾಂತಿಯ ಬೀಡಾಗಿದೆ. ಗೊಂದಲದ ಗೂಡಾಗಿದೆ. ಇದು ಇನ್ನಷ್ಟು ಹದಗೆಡುವುದನ್ನು ತಡೆಯಲೇಬೇಕು. ಯಾಕೋ ಗೊತ್ತಿಲ್ಲ ಈಗೀಗ ನಿನ್ನ ನೆನಪು ತುಂಬಾ ಆಗ್ತಿದೆ. ನಮ್ಮ ದೇಶದ ಅಭಿವೃದ್ದಿಗೆ ನಿನ್ನಂಥ ನಾಯಕ ಬೇಕೆನಿಸುತ್ತದೆ. ಆದ್ದರಿಂದ ಕಡೆಯದಾಗಿ ನಿನ್ನಲ್ಲಿ ಹೇಳುವುದೆಂದರೆ ನಮ್ಮ ತಪ್ಪುಗಳನ್ನು ಮನ್ನಿಸಿ ಮತ್ತೊಮ್ಮೆ ಹುಟ್ಟಿ ಬಾ...
ನಿನ್ನ ಆಶಿರ್ವಾದ, ಆಗಮನದ ನಿರೀಕ್ಷೆಯಲಿದ್ದೇನೆ...
ಕೆ.ಕೆ.ಫಾತಿಮ ಇಶ್ರತ್
